Tuesday, September 4, 2012

ಗುರುಭ್ಯೋ ನಮಃ


ಗುರುಗಳೆಂದರೆ ನಮಗೆ ನಮ್ಮ ಶಿಕ್ಷಕರು, ವಿಮರ್ಷಕರು, ಪರೀಕ್ಷರು ಮತ್ತು ಕರಿ ಬಸಜ್ಜನಂತಹ ದೇವರುಗಳು. ಸದಾ ನಮ್ಮನ್ನು ಸರಿ ದಿಕ್ಕಿನಲ್ಲೇ ಮುನ್ನಡೆಸುವ ಇವರ ನಿಸ್ವಾರ್ಥ ಪ್ರೀತಿಯು ನಮ್ಮ ಬಾಳ ಬೆಳಕು.

ಶಾಲೆಯಲಿ ಕಲಿಸಿದ ಗುರುಗಳು ನಮ್ಮ ಬದುಕಲ್ಲಿ ಎನಿತು ಮುಖ್ಯರಾಗುತ್ತಾರೋ ಅಂತೆಯೇ ನಮ್ಮ ಬದುಕಲ್ಲಿ ಪಾಠ ಕಲಿಸಿದವರೂ ನಮಗೆ ಗುರುಗಳ ಸಮಾನರೇ.

ಬದುಕಿನ ಎಷ್ಟೋ ಕಹಿ ಘಟನೆಗಳನ್ನು ಹುಟ್ಟು ಹಾಕುವ ಆಪ್ತರಿಂದ ನಾವು ಪಾಠ ಕಲಿತಿರುತ್ತೇವೆ. ಅಂತಹ ಅನುಭವವು ನಮ್ಮನ್ನು ಹೊಸ ದಿಕ್ಕಿಗೆ ಹೊಸ ಆಲೋಚನೆಗಳಿಗೆ ಮತ್ತಷ್ಟು ಹುಷಾರಾಗಿಯೂ ಉತ್ಸಹಕತೆಯಿಂದಲೂ ಮುನ್ನಡೆಸುತ್ತದೆ. ಇವರೂ ನಮಗೆ ಗುರುಗಳೇ.

ಶಾಲೆ ಕಾಲೇಜುಗಳ ಉಪಾದ್ಯಾಯ ಪ್ರಾಧ್ಯಾಪಕರ ಜೊತೆಗೆ ನಮಗೆ ಹೊರ ಜಗತ್ತಿನಲ್ಲಿ ಕೆಲಸ ಕಲಿಸುವ ನಮ್ಮನ್ನು ತಿದ್ದುವ ಎಲ್ಲರೂ ನಮಗೆ ಗುರು ಸಮಾನರೇ.

ಕ್ಯಾಮರಾ ಹೇಳಿಕೊಟ್ಟವರು, ಗಣಕಯಂತ್ರ ಕಲಿಸಿದವರೂ, ಬ್ಲಾಗ್ ಪರಿಚಯಿಸಿದವರೂ, ನನ್ನ ಕವನಗಳನ್ನು ಮುಲಾಜಿಲ್ಲದೆ ತಿದ್ದಿದವರೂ, ನನ್ನ ವಸ್ತ್ರ ವಿನ್ಯಾಸ ಮಾಡುವ ದರ್ಜಿ ಜೊತೆಗೆ ಅನುಕ್ಷಣ ನಮ್ಮನ್ನು ತಿದ್ದುವುದರಲ್ಲೇ ಮೆತ್ತಗಾಗುವ ನಮ್ಮ ಬಾಳ ಸಂಗಾತಿಗಳೂ ನಮಗೆ ಗುರುಗಳೇ.

"ಹೊರ ಜಗವ ತೋರುವರು
ಒಳ ತೋಟಿ ನೀಗುವರು
ಬುದ್ದಿ ಸಾಣೆ ಹಿಡಿವವರು
ಅವ್ಯಕ್ತ ಬೆತ್ತಗಾಹಿಗಳು
ಎನಿತೋ ನನಗೆ
ದಿನ ದಿನ ಗುರುಗಳು..." 


 

Saturday, July 7, 2012

ಅಲಾ ಬೆಂಗಳೂರೇ...


 
ನನ್ನ ಬೆಂಗಳೂರು, ಮೊದಲಿಂದಲೂ ಅರ್ಥ ಮಾಡಿಕೊಳ್ಳುವ ಮನದೆನ್ನೆಯಂತೆ ಅಪ್ಪಿ ಮುದಗೊಳಿಸಿದರೇ, ಕೆಲವೊಮ್ಮೆ ಅರ್ಥ ಮಾಡಿಕೊಳ್ಳದೆ ದೂರವಾದ ಗೆಳತಿಯಂತೆ ಕಕ್ಕಾಬಿಕ್ಕಿಯಾಗಿಸುತ್ತಾಳೆ!

  • ನನ್ನ ತಾಯಿ ನನ್ನ ಮನೆ ರಸ್ತೆಯಲ್ಲಿ ಬೆಳಿಗ್ಗೆ ೮ ಗಂಟೆ ಮೇಲೆ ವಾಕಿಂಗ್ ಹೋಗಲು ಆಗಲ್ಲ ಮಗ, ಮೈ ಮೇಲೇ ಕಾರು ಲಾರಿಗಳು ಬರ್ತವೆ ಅಂದಾಗ...
  • ಅತಿ ಮಳೆ ಹುಯ್ದು ನಮ್ಮ ತಗ್ಗು ಪ್ರದೇಶಗಳೆಲ್ಲಾ ಜಲಾವೃತವಾದಾಗ, ಕಾಪಾಡುವ ಗಾಳಿ ಆಂಜನೇಯನ ದೇವಸ್ಥಾನಕ್ಕೂ ನೀರು ನುಗ್ಗಿ, ಪರಮಾತ್ಮ ನಿನಗ್ಯಾರಪ್ಪಾ ಕಾಪಾಡ್ತಾರೆ ಅನಿಸಿದಾಗ...
  • ಹಾದಿ ಬದಿ ಧುತ್ತೆಂದು ಯಾವುದೋ ಭಿಕ್ಷುಕಿ ಎಳೇ ಕಂದಮ್ಮನನ್ನು ಹಳೇ ಸೀರೆಯಲಿ ಸುತ್ತಿಕೊಂಡು ಕೈ ಚಾಚಿದಾಗ..
  • ಒಳ್ಳೆ ಓಡುವ ಕುದುರೆಯಂತಹವರು ಥಟ್ ಅಂತ ನೌಕರಿ ಕಳೆದುಕೊಂಡಾಗ ಪರಿಚಿತರೆಲ್ಲ ಅಪರಿಚಿರು ಅನಿಸುವಾಗ...
  • ನಟ್ಟ ನಡು ರಾತ್ರಿಯಲಿ ಬಸ್ಸೇ ಬರದ ಬಸ್ ಸ್ಟಾಪಿನಲ್ಲಿ, ಕರೆದ ಕಡೆ ಬಾರದ ಆಟೋ ಬಂಧುಗಳನ್ನು ಶಪಿಸುತ್ತಾ ನಿಂತಾಗ, ಅಲ್ಲೇಲ್ಲೋ ಹೊಯ್ಸಳ ಗಾಡಿಯ ಸೈರನ್ ಕೇಳಿದಾಗ...
  • ಸರಗಳ್ಳರ ಹಾವಳಿಗೆ ಬೇಸತ್ತು ಪೊಲೀಸರು ಬೆಳಿಗ್ಗೆಯೇ ಚೀತಾ - ಹೊಯ್ಸಳಾಗಳಲ್ಲಿ ಬೀಟ್ ಆರಂಭಿಸಿದಾಗಲಿಂದ, ನನ್ನ ಪಾರ್ಕಿನಲ್ಲಿ ವ್ಯಾಯಾಮ ಮಾಡುವಾಗ ಬಲಗಡೆ ಚೀತಾ ಕಾಣಿಸಿ, ಎಡಗಡೆ ಹೊಯ್ಸಳ ಕಾಣಿಸಿ, ನಗರ ಮೊದಲಷ್ಟು ಸುರಕ್ಷಿತ ಅಲ್ಲ ಅನಿಸತೊಡಗಿದಾಗ...
  • ಲಾಲ್ ಬಾಗಿಗೆ ಪ್ರವೇಶ ಧನ ಅಂತ ಬೋರ್ಡ್ ನೇತು ಹಾಕಿದಾಗ...
  • ಚಿಕ್ಕ ಪುಟ್ಟ ಹೋಟೆಲ್ ಮುಚ್ಚಿ ಅದೇನೋ ಡೇ, ಅಲ್ಲೇನೋ ಹಟ್ ಅಂತ ಶುರುವಾದಾಗ...
  • ಮೆಟ್ರೋ ಕಾಮಗಾರಿ, ರಸ್ತೆ ಅಗೆತ, ಏಕ ಮುಖ ಸಂಚಾರ ಮತ್ತು ಭೋರಿಡುವ ವಾಹನಗಳ ನಡುವೆ, ನನ್ನ ಗಾಡಿ ಸ್ಟಾರ್ಟಿಂಗ್ ಟ್ರಬಲ್ ಕೊಟ್ಟಾಗ...
  • ಇಡೀ ದೇಶದಲ್ಲಿ ಪದೇ ಪದೇ ದುಬಾರಿ ನಗರ ಅಂತ ಘೋಷಿಸಿದಾಗ...
 ನನಗೆ ಬೆಂಗಳೂರು ಅಪರಿಚಿತ ಅನಿಸಲಾರಂಭಿಸುತ್ತದೆ!!!

Sunday, April 22, 2012

ಶ್ರೀ. ರವಿ ಮೂರ್ನಾಡು ಅವರ ನನ್ನ ಬಗೆಗಿನ ಬ್ಲಾಗ್ ಬರಹ.

http://ravimurnad.blogspot.in/2012/04/blog-post_21.html


http://www.gulfkannadiga.com/news-64622.html



ನಾನು full tight, out of order. ಉಬ್ಬುಬ್ಬಿ ಹೋಗಿದ್ದೇನೆ.

ಪುಟ್ಟ ಮೀನಿನಂತಹ ಈ ಅಙ್ಞಾತ ಕವಿಗೆ ಇದು ಭಾರೀ ಬಹುಮಾನ. ಅಸಲು ನನ್ನ ನೀರೇ ಬಾವಿಯಗಲ, ಚಕ್ಕುಬಂದಿಯೂ ಕೂಗು ದೂರ! ತಿಳಿದದ್ದೇ ಅರೆ ಪಾವು. ನನ್ನ ಕವಿತೆಗಳೋ(!) ಸ್ವಗತಗಳು. ಖಾಸಗಿ ಅಳಲು.

ನನ್ನ ಕವಿತೆಗಳನ್ನು ಇಲ್ಲಿ ವಿಶ್ಲೇಷಿಸಿದ ರೀತಿ ತಕ್ಕುದಾಗಿದೆ. ಒಳ ಹೂರಣವು ನಿಮಗೆ ಸರಿಯಾಗಿಯೇ ಅರ್ಥವಾಗಿದೆ ಸಾರ್.

ಪದ್ಯ ಗರ್ಭಿಸುವಾಗ ಗೊಜಲು ಅಥವ ಕಠಿಣಾರ್ಥ ಅಂತ ಮೊದಲ ಓದಿಗೆ ಅನಿಸಿದರೂ, ಈ ಪದಾರ್ಥವಿಲ್ಲದೆ ಈ ಪಾಕಗಟ್ಟಲಾರದು ಎಂದೆಣಿಸಿ ಬರೆಯುತ್ತೇನೆ. ಸ್ವಲ್ಪ ಸ್ಥೂಲ ಕಾಯದ ಈ ಕವಿಯ ಕಾವ್ಯ ಕಬ್ಬಿಣದ ಕಡಲೆಯಾಗದಂತೆ ಆಶೀರ್ವದಿಸಿ.

ಧನ್ಯೋಸ್ಮಿ, ಸಮಕಾಲೀನ ಕಾವ್ಯೋತ್ತಮ ಶ್ರೀಯುತ ರವಿ ಮೂರ್ನಾಡು ಅವರು ತಮ್ಮ ಅತ್ಯುತ್ತಮ ಬ್ಲಾಗಿನಲ್ಲಿ ನನ್ನ ಪುಟ್ಟ ಈಜನ್ನು ಸರಿಯಾಗಿ ಗ್ರಹಿಸಿ, ತಿದ್ದಿ ಬರೆದದ್ದು ನನಗೆ ಮಾರ್ಗ ಸೂಚಿ ಮತ್ತು ದಿಕ್ಸೂಚಿ. ಅಭಾರಿ ರವಿ ಸಾರ್.
ತಮ್ಮ ಅಂತರಾಷ್ಟ್ರೀಯ ಜಾಲ ಪತ್ರಿಕೆಯಲ್ಲಿ ಪ್ರಕಟಿಸಿದ ಶ್ರೀಯುತ ರಾಮಚಂದ್ರ ಅವರಿಗೂ ಗಲ್ಫ ಕನ್ನಡಿಗಕ್ಕೂ ಕೃತಙ್ಞತೆಗಳು.

ಇಷ್ಟು ದೊಡ್ಡ ಅಭ್ಯಂಜನಕ್ಕೆ ನಾನು ಪ್ರಾಪ್ತನಾದದ್ದು ನನ್ನ ಪ್ರಯತ್ನಕ್ಕೆ ಸಂದ ಅತ್ಯುನ್ನತ ಪುರಸ್ಕಾರ.

Tuesday, April 3, 2012

ಸಂತೆಯಲಿ ಮನೆ ಮಾಡಿ...!!!





ಅಂದ ಹಾಗೆ, ಈ ನಡುವೆ ನನ್ನ ಮನೆ ಎಂಬುದು "ಸಂತೆಯಲ್ಲಿ ಮನೆಯ ಮಾಡಿ..." ಅನ್ನೋ ತರಹ ಆಗೋಗಿದೆ!


ತುಂಬಾ ಸುಸ್ತಾಗಿ ಮನೆಗೆ ರಾತ್ರಿ ಯಾವುದೋ ಹೊತ್ತಿನಲ್ಲಿ ಬಂದು, ನಾಲ್ಕು ತುತ್ತು ಶಾಸ್ತ್ರಕ್ಕೆ ಅಂತ ತಿಂದು ಇನ್ನೇನು ಮಲಗಬೇಕು ಅಂತ ಹಾಸಿಗೆಗೆಗೆ ಬಿದ್ದರೆ, ಹಿಂದಲ ಮನೆಯವರ ಮೈಕ್ ಸೆಟ್ ಶುರೂ.


ಆಂಧ್ರ ಕಡೆ ರೆಡ್ಡಿಗಳೂ ಅಂತ ಕಾಣುತ್ತೆ. ಅದೇನು ಕುರುಡು ಪ್ರೀತಿಯೋ ಕಾಣೆ! ಆಂಧ್ರಪ್ರದೇಶದ ಮಾಜೀ ಮುಖ್ಯ ಮಂತ್ರಿ ದಿವಂಗತ. ವೈ.ಎಸ್. ರಾಜಶೇಖರ ರೆಡ್ಡಿಯವರನ್ನು ಗುಣಗಾನ ಮಾಡುವ ಜಾನಪದ ಶೈಲಿಯ ಹಾಡನ್ನು ಜೋರಾಗಿ ಹಾಕಿಬಿಡುತ್ತಾರೆ. ಅಲ್ಲಿಗೆ ನನ್ನ ಎಡಗಿವಿ ಮಟಾಷ್!


ಇನ್ನು ಬಲಗಿವಿಗೆಗೆ ಯಾಕೆ ಪುರಸೊತ್ತೂ ಅಂತ ಆ ಕಡೆ ಮನೆಯ ಒರಿಸ್ಸಾ ಮುದುಕ ತಾನೇನು ಕಮ್ಮಿ ಅಂತ ಜೋರಾಗಿ ಟೀವಿ ಹಾಕುತ್ತಾನೆ. ಅಲ್ಲಿಗೆ ನನ್ನ ಎರಡೂ ಕಿವಿಗಳ ತಮಟೆಗಳು ಕಿತ್ತು ಊರಗಲವಾಗಿರುತ್ತವೆ.


ಮೊದಲೇ ಬೇಸಿಗೆ, ಜೊತೆಗೆ ಈ ತಾರಕ ಸ್ವರದ ಕಿರಿಕಿರಿ ನನ್ನ ನಿದ್ದೆ ಅಸ್ತಗತವಾಗಿ, ಬದುಕು ಹರಹರಾ ಎನ್ನುವಂತಾಗಿದೆ...


ನಡು ರಾತ್ರಿ ಯಾವಾಗಲೋ ಅವರಿಗೇ ಬೇಜಾರಾದಾಗ ಬ್ಯಾಂಡ್ ಸೆಟ್ ಬಂದ್ ಆದರೆ ನನಗೂ ಒಸೀ ನಿದ್ದೆ.


ಇನ್ನೂ ಬೆಳಗಿನ ಕಥೆ ಇನ್ನೂ ಘೋರ....


ನಾಲ್ಕು ಗಂಟೆ ಸುಮಾರಿಗೆ ಪಕ್ಕದ ಮನೆಯ ನಡು ವಯಸಿನ ಹೆಂಗಸಿಗೆ ಶಿರಡಿ ಸಾಯಿ ಬಾಬಾ ಅವರ ಮೇಲೆ ಭಕ್ತಿ ಉಕ್ಕಿ ಬಂದು, ಆಕೆ ಆಡಿಯೋ ಪ್ಲೈಯರ್ ಹಚ್ಚಿಟ್ಟು ಬಿಟ್ಟರೆಂದರೆ ಅಲ್ಲಿಗೆ ನನ್ನ ನಿದ್ರೆಗೆ ಫುಲ್ ಸ್ಟಾಪ್...


ಅಯ್ಯೋ ನನ್ನ ಮನೆ ಯಾಕೋ "ಸಂತೆಯಲಿ ಮನೆ ಮಾಡಿ....!!!!" ಅನ್ನೋ ತರಹ ಆಗಿದೆ ಸ್ವಾಮಿ.

(ಚಿತ್ರ ಕೃಪೆ : ಅಂತರ್ಜಾಲ)

Wednesday, December 21, 2011

ದಾವಣಗೆರೆಯಿಂದ...


ದಾವಣಗೆರೆಯ ಬ್ಲಾಗ್ ಮಿತ್ರ ಅಕ್ಕರೆಯಿಂದ ಕೊಟ್ಟ ಪ್ರಶಸ್ತಿ ಪತ್ರ:

"ನೆನಪುಗಳ ನೆನಪು ಸದಾ ನೆನಪಾಗಿರಲು"

ಅನನ್ಯ ಅದ್ವಿತೀಯ ಅದ್ಭುತಗಳ ಕಾರಣ
ನೀವು ಬಿಡುವ ಅಪರೂಪದ ಪದಗಳ ಬಾಣ
ಅಲ್ಲೊಂದು ಕಥೆ ಕವನ ಕಾಲ ಹರಣ
ಅಲ್ಲೊಮ್ಮೆ ನಿಮ್ಮ ಪರಿಚಯದ ಕ್ಷಣ

ಅಂಧ ದೀಪಾವಳಿಯ ಆ ಒಂದು ಕವನ
ಮೈಮರೆತು ಎಲ್ಲೋ ಹೋಯಿತು ಮನ
ಅದರ ನಂತರ ಓದುತ್ತಾ ಪ್ರತಿ ದಿನ
ಬಾನೆತ್ತರದ ಭಾವನೆಗಳ ನಿಮ್ಮ ಕವನ

ಮತ್ತೆ ಮಾಡಿದಿರಿ ದಂಡಯಾತ್ರೆಯ
ಹೇಳಿದಿರಿ ನಿಮ್ಮ ಗೆಳತಿಯರ ಪರಿಚಯ
ಹಳೇ ಭಾವನೆಗಳಿಗೆ ಹೊಸ ಪ್ರೀತಿಯ
ಸೇರಿಸಿ ಬರೆದಿರಿ ಮಜವಾದ ಕವಿತೆಯ

ಮರಗಿಡಗಳ ಮೇಲಿನ ನಿಮ್ಮ ಪ್ರೀತಿ
ಆಗಿತ್ತು ಅಲ್ಲಿ ಕವನಕ್ಕೆ ಹೊಸ ಸಂಗತಿ
ಗಿಂಡಿಯ ಮಾಣಿ , ಪಿಕಲಾಟದ ಪಜೀತಿ ಜೀ ಹುಜೂರ್
ಇನ್ನು ನಮ್ಮನ್ನು ಕಾಡುತೈತಿ ಹೊಸ
ರಾಮಾಯಾಣದ ಸುಗ್ರೀವರಂತೆ

ಎಲ್ಲರೂ ಕಾಣುವರಂತೆ ನಿಮ್ಮದಿಲ್ಲಿ ಚಿಂತೆ
ನಿಮ್ಮ ಮಾತುಗಳಲ್ಲಿ ನೀವು ಗುರುವಿನಂತೆ
ಅದೇನೇ ಇರಲಿ ಕೊನೆಯಲ್ಲಿ ಮಗುವಿನಂತೆ
ಮರ ಹಿಡಿದ ನಿಮ್ಮನ್ನು ಮಗುವಿನಂತೆ ಕಂಡಿದೆ

ನನ್ನ ಮನಸ್ಸಿನ ನೆನಪುಗಳು ಕವನವಾಗಿದೆ
ಬರೆಯಲು ಹಲವು ದಿನಗಳ ಯೋಚನೆ ಮಾಡಿದೆ
ನೆನಪುಗಳ ನೆನಪು ಸದಾ
ನೆನಪಾಗಿರಲು ಕವನ ಬರೆದೆ.. :)

|| ಪ್ರಶಾಂತ್ ಖಟಾವಕರ್ ||

Friday, December 9, 2011

ಜೀ ಹುಜೂರ್!

ನನ್ನ "ಜೀ ಹುಜೂರ್!" ಕವನಕ್ಕೆ ಭಾವಾರ್ಥ :

(ಸಂಸ್ಥೆಗಳು ಕಾರ್ಮಿಕರನ್ನು ಹೇಗೆ ಬಳಸಿಕೊಳ್ಳುತ್ತವೆ ಮತ್ತು ಕೆಲವು ಚಮಚಾಗಳು ಹೇಗೆ ಬದುಕಿ ಬಿಡುತ್ತವೆ, ಅನ್ನುವುದೇ ಈ ಕವನ)

ಹವಾ ನಿಯಂತ್ರಿತ ಕೊಠಡಿಯಲಿ ಕೂತು ಸಂಸ್ಥೆಯ ಧಣಿಗಳು ಕಿರುಚಾಡಿದರೆ,ಮಳೆ ಬಂದಾಗಷ್ಟೇ ಕಾಣುವ ಯಕ್ಚಿತ್ ಈಚಲ್ ಹುಳುಗಳಂತ ನಮಗೆ ಅಕಾಲದಲ್ಲಿ ರೆಕ್ಕೆ ಬಂದು ಹಾರಾಡಿಬಿಡುತ್ತೇವೆ.

ಬಿಟ್ಟಿಯಾಗಿ ಬಿಟ್ಟಿದ್ದೀವಿ ಇವರಿಗೆ ನಮ್ಮತನ ಫಲವತ್ತಾಗಿದ್ದರೆ ಇಲ್ಲೇಕೆ ಸೇರುತ್ತಿದ್ದೆವು ನಾವು?
ಚಂದ್ರನ ನೆಲದಂತೆ ಸುಖದ ಬೆಳೆ ಕಾಣದಂತವರು,
ಭತ್ತ ಅಕ್ಕಿ ಬಿಟ್ಟು ಅನ್ನ ಹಾಕುತ್ತೀವಿ ಅಂತ ಗಿಲೀಟು ಮಾಡುತ್ತಾರೆ,
ಈ ಸಂಬಳವೋ ಮಳೆಗೆ ತುಂಬೋ ಕುಂಟೆಯಂತಹ ಪುಟ್ಟ ಹೊಂಡ
ಸಂಸಾರ ಖರ್ಚಲಿ ಮುಳಗೆದ್ದರೆ ಕಾಸು ಖಾಲಿ.

ಬ್ರಹ್ಮನೂ ಸಮಯ ಹಾಳು ಮಾಡಿದರು
ಆತ ನಮ್ಮ ಜನುಮದ ಮಹಾನ್ ಲೇಖಕನವನೇ?
ಸುಮ್ಮನೆ ತೀಟೆಗೆ ಗೀಚಿದ್ದಾನೆ
ಬಗ್ಗಿಸಿ ಬರೆದು ಹುಟ್ಟಿಸಿದರಾಯ್ತೇ
ನಮ್ಮ ಮೆದುಳು ತಲೆಯಲಿಲ್ಲ ಅದಿರುವುದೇ ಮಂಡಿ ಚಿಪ್ಪಿನ ಮೇಲೆ
ಕಾಟಾಚರದ ಬರೆದ ಹಣೆ ಬರಹ!

ನಾವೆಲ್ಲ ಹೊರಗೆ ಧೈರ್ಯದ ಮುಖವಾಡ ಧರಿಸಿದ ವೀರರು
ಎಲ್ಲೋ ಕತ್ತಿ ಮಸೆಯುತ್ತಾರೆ ಅಂತ ಭಯ ಪಟ್ಟು
ಮನದ ಬಿಲ ಸೇರಿಕೊಂಡು ಬಕ್ಕಾಬಾರಲು ಮಲಗಿ ಬಿಡುತ್ತೇವೆ,
ಯಾರಾದರೂ ಹೊಗಳಿದರೆ ನಾವು ವಿಕ್ರಮಾದಿತ್ಯರು
ಅವರು ದಾಟಿಸುತ್ತಾರೆ ನಮ್ಮ ಹೆಗಲಿಗೆ ಹೆಣ,
ಛತ್ರಿ ಬುದ್ಧಿಯ ಸಹೋದ್ಯೋಗಿಗಳೇ ನಿಮಗಿದೋ
ಉಧೋ ಉಧೋ ಪ್ರಣಾಮ!

ಕಮ್ಮೀ ಸಂಬಳಕ್ಕೆ ಸಾಕ್ಕಿದ್ದೇವೆ
ಕೆಲಸ ತೆಗೆಯಿರಿ ನಮ್ಮ ಗಣಿ ಆಳಕೂ
ಹಿಂಡಿರಿ ನಮ್ಮ ಕಡೆ ಹನಿ ನಿಮಗೆ ಕಾಸಾಗಲೀ
ಹಿಡಿಯಿರೀ ನಮ್ಮ ಮೂಗು ದಾರ,
ನಿಸ್ತಂತು ಛಾಟಿ ಮೊಬೈಲಿನಲಿ ಆಙ್ಞಾಪಿಸಿರಿ
ಬರಲಿ ಬೆನ್ನ ಬಾಸುಂಡೆ
ನಿಮ್ಮ ತಿಜೋರಿ ದೇಹ ಕೊಬ್ಬಿನಿಂದ ಉಬ್ಬಲಿ, ಹುಜೂರ್!

ಈ ಹೆಗಲು ಇಷ್ಟವಾಯಿತೇ ಸ್ವಾಮಿ?
ಅಂಡೂರಿಸಿ ಬಿಡಿ ಯಮ ಭಾರದ ಕಲಸದ ಒತ್ತಡಕ್ಕೆ ಒಗ್ಗಿದೆ ದೇಹ,
ನಾವಾದರೂ ದಡ್ಡಪ್ಪಗಳು ಹಗಲೆಲ್ಲ ಹೊತ್ತೆವು ಅಂಬಾರಿ
ಒಮ್ಮೆಲೆ ದಿಟ್ಟಿಸಿ ಬೆಚ್ಚಿದೆವು
ಒಳಗೆ ನಿಮ್ಮ ಪೈಶಾಚ್ಯ ಅಟ್ಟಹಾಸ!

ಗಾಜು ಕಿಟಕಿಯ ಹಿಂದಿನ ಕಾವಲು ಕ್ಯಾಮರಾದ
ಬರೀ ಕಣ್ಣ ಕಾವಲು ಸಂಬಳದ ವಾಹನವಿರದ ಕಾಲಾಳುಗಳಾದ ನಮಗೆ
ಕೆಲಸ ಕಳೆದು ಕೊಳ್ಳುವ ಭಯದ ತುರಿಕೆ ಸಾಂಕ್ರಾಮಿಕ...
ಸುಳಿವಿರದ ಸಾವಿಗೆ ಹೆದರಿ
ಬೆವರಿದೆವು ಬೆದರಿದೆವು
ಹಲುಬಿದೆವು ಮುಂದಿರುವ ಸುಖ ಸುಖಿಸದೆ!

[ಈಗ ದಯಮಾಡಿ ಮತ್ತೊಮ್ಮೆ ಕವನ ಓದಿಕೊಳ್ಳಿ :]

http://badari-poems.blogspot.com/2011/12/blog-post.html

ತಣ್ಣನೆ ಅರಮನೆ ಗುಡುಗು
ಈಚಲಿಗೋ ಅಕಾಲ ರೆಕ್ಕೆ!

ಬಿಟ್ಟೇ ಬಿಟ್ಟೀದ್ದೀವಿ ನಮ್ಮೊಳಗ
ಖರಾಬು ಬಂಜರು ಭೂಮಿ
ಉಳುಮೆ ಕಾಣದ ಚಂದ್ರಮೈ,
ಅನ್ನ ಬೆಳೆಯುವ ಗಿಲೀಟೇಕೆ
ಇಲ್ಲಿ ಪ್ರಾಪ್ತಿಯೇ ಕುಂಟೆ
ಮುಳುಗೆದ್ದರೆ ನೀರೇ ಬರಿದು

ಬರಮಪ್ಪನೂ ಸಮಯಗೇಡಿ
ಮಹಾನ್ ಲೇಖಕನವನೇ?
ತೀಟೆ ಶಾಸ್ತ್ರದ ಒಕ್ಕಣೆ
ಬಗ್ಗಿಸಿ ಬರೆದು ಹುಟ್ಟಿಸಿದರಾಯ್ತೇ
ನಮ್ಮ ಮಂಡಿ ಚಿಪ್ಪಿನ ಮೇಲೆ
ಕಾಟಾಚರದ ಹಣೆ ಬರಹ!

ಹೊರಗೆ ಮುಸುಗುವೀರರು
ಕತ್ತಿ ನೂರುವ ಸದ್ಧಿಗಂಜಿ
ಬಿಲದಾಳ ಬಕ್ಕಾಬಾರಲು,
ಪರಾಕ

Sunday, December 4, 2011

ಓಶೋ! : ಸರಿಯೇ ತಪ್ಪೇ?

ಇತ್ತೀಚೆಗೆ ಬ್ಲಾಗ್ ಒಂದರಲ್ಲಿ ಧ್ಯಾನದ ಮುಖೇನ ಮನಃ ಶುದ್ದೀಕರಣದ ಬಗ್ಗೆ ಆ ಲೇಖಕರು ಪ್ರಸ್ತಾಪಿಸುತ್ತಾ, ಓಶೋರವರ ಬೋಧನೆಗಳನ್ನು ಉದಾಹರಿಸಿದರು. ಇದು ಭಾರೀ ಚರ್ಚೆಗೆ ಗ್ರಾಸವಾಯಿತು.

ಓದುಗರೊಬ್ಬರು ಕಮೆಂಟಿಸುತ್ತಾ ಓಶೋ ಸ್ಥಿತಪ್ರಜ್ಞರಲ್ಲ, ಅವರು ಹೊಸ ಆವಿಷ್ಕಾರವನ್ನು ಮಾಡಲು ಹೊರಟು ಗುರಿ ತಲುಪದೇ ಇದ್ದವರು. ಎಂದು ಅಭಿಪ್ರಾಯವನ್ನು ದಾಖಲಿಸಿದರು. ಹೀಗೆ ಯಾವುದನ್ನೂ ಸಾರಾಸಗಟಾಗಿ ತಿರಸ್ಕರಿಸುವುದು ಪೂರ್ವಾಗ್ರಹ ಪೀಡಿತ ಕಲ್ಪನೆ ಅಂತ ನನ್ನ ಅನಿಸಿಕೆ.

ಅವರ ಆಶ್ರಮದ ಅಂತರಂಗದ ಊಹಾಪೋಹ ಸುದ್ದಿಗಳು, ಐಷಾರಾಮಿ ಜೀವನ ಶೈಲಿ ಮತ್ತು ಕಾಸ್ಟ್ಲೀ ಕಾರುಗಳ ಪ್ರೀತಿಗಳ ಹೊರತಾಗಿಯೂ ಅವರ ಅಪಾರ ಙ್ಞಾನ ಸಂಪತ್ತು ಮತ್ತು ಅವರ ನೂರಾರು ಆದ್ಯಾತ್ಮಿಕ ಪುಸ್ತಕ ಬರವಣಿಗೆಯನ್ನು ಗೌರವಿಸಬೇಕಾಗುತ್ತದೆ.

ಶಾಸ್ತ್ರ, ಧರ್ಮ, ಗುರು, ವಾಸ್ತು, ಜ್ಯೋತಿಷ್ಯ, ಸಂಗೀತ ಮತ್ತು ಸೌಂದರ್ಯ ಹೀಗೆ ಅವರವರ ಭಾವನೆಗಳಿಗೆ ಮತ್ತು ನಂಬಿಕೆಗೆ ಬಿಟ್ಟದ್ದು. ಯಾವುದನ್ನು ನಂಬ ಬೇಕು ಯಾರನ್ನು ಒಪ್ಪಬೇಕು ಎನ್ನುವುದು ಪ್ರತಿಯೊಬ್ಬ ಮಾನವನ ವಯುಕ್ತಿಕ ಹಕ್ಕು.

ಓಶೋ ಪರ ವಿರೋಧಿ ಚರ್ಚೆಗಳಿಗೆ ಇದು ವೇದಿಕೆಯಾಗ ಬಾರದು. ಒಳ್ಳೆಯ ವಿಚಾರಗಳು ಎಲ್ಲಿಂದ ಬಂದರೂ ಅದನ್ನು ವಿಶ್ಲೇಷಿಸಿ ಸ್ವೀಕರಿಸಬೇಕೆ ಹೊರತು, ಅದರ ಮೂಲವನ್ನು ಕೆದಕುತ್ತಾ ಕೂರ ಬಾರದು.

ಓಶೋ ತುಂಬಾ ಓದಿಕೊಂಡವರು. ಅವರು ಜಗತ್ತಿನ ಙ್ಞಾನ ಮೂಲಗಳನ್ನು ಅರ್ಥೈಸಿಕೊಂಡವರು. ಅದನ್ನೆಲ್ಲ ಕ್ರೋಢೀಕರಿಸಿ ಪುಸ್ತಕ ಮತ್ತು ದ್ವನಿ ಮುಖೇನ ಇಂದಿಗೂ ಪ್ರಚಲಿತದಲಿ ಇಟ್ಟವರು.
ಪ್ರತಿ ಗುರುವು ಸ್ವಯಂಭು ಗುರುವಾಗಲು ಸಾಧ್ಯವೇ ಇಲ್ಲ. ಆತನದೂ ನಿರಂತರ ಶಿಷ್ಯ ವೃತ್ತಿ. ತಾನು ಗ್ರಹಿಸಿದ, ಕಲಿತ ಅಥವಾ ಓದಿಕೊಂಡ ಙ್ಞಾನವನ್ನು ಆತ ಹಂಚಲು ಕೂರುತ್ತಾನೆ. ಹಲವು ಮೂಲಗಳಿಂದ ನಾವು ಓದಿಕೊಳ್ಳಲಾರದ ಙ್ಞಾನವನ್ನು ಆತ ಶುದ್ಧೀಕರಿಸಿ ನಮಗೆ ಗುಕ್ಕು ನೀಡುತ್ತಾ ಹೋಗುತ್ತಾನೆ.

ಬೋಧನೆಯಲಿ ಸತ್ವವಿಲ್ಲದಿದ್ದರೆ ಅದು ಬೇಗನೆ ಅಪ್ರಸ್ತುತವಾಗಿ ನಶಿಸಿ ಹೋಗುತ್ತದೆ. ಪೊಳ್ಳು ಮಾರಿಕೊಳ್ಳುವ ಡೋಂಗಿ ಗುರುಗಳ ಮದ್ಯೆ ತೀರಿಕೊಂಡು ದಶಕಗಳು ಕಳೆದರೂ ಇನ್ನೂ ಪ್ರಸ್ತುತದಲ್ಲೇ ಉಳಿಯಲು ಅವರಲ್ಲೇನೋ ಗಟ್ಟಿ ಮಾಲು ಇರಬೇಕಲ್ಲವೇ!

ಗೀತೆಯಲ್ಲಿನ ಶ್ಲೋಕಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕೇ ವಿನಃ, ಯುದ್ಧ ಭೂಮಿಯಲ್ಲಿ ಎಲ್ಲ ಕೆಲಸ ಬಿಟ್ಟು ಶ್ರೀಕೃಷ್ಣ ಪರಮಾತ್ಮನು ಗೀತಾಮೃತ ಏಕೆ ಬೋಧಿಸಿಕೊಂಡು ಕೂತರು ಎಂದು ಕ್ಯಾತೆ ತೆಗೆದರೆ, ವಾದಕ್ಕೆ ಬೀಳುವುದೇ ವ್ಯರ್ಥ!

ಈ ಲೇಖನಕ್ಕೆ ಕಾರಣವಾದದ್ದು ಡಾ|| ಡಿ.ಟಿ.ಕೆ. ಮೂರ್ತಿಯವರ ಈ ಲೇಖನ. ಬೋನಸ್ ಆಗಿ ಆ ಲೇಖನಕ್ಕೆ ಇತರರು ಕಾಮೆಂಟುಗಳನ್ನೂ ಓದಿರಿ:

"ಧ್ಯಾನದಲ್ಲಿ ಫ್ಲಷ್ ಮಾಡಿ!"
http://dtkmurthy.blogspot.com/2011/12/flush-meditatively.html